ಅಭಿಮಾನಿಗಳಿಂದ ಶಾಸಕ ತನ್ವೀರ್ ಸೇಠ್ ಅವರ ೫೫ನೇ ವರ್ಷದ ಹುಟ್ಟುಹಬ್ಬ ಆಚರಣೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಸುರ್ಜಿವಾಲಾ, ವೇಣುಗೋಪಾಲ್, ಡಿ.ಕೆ.ಶಿವಕುಮಾರ್ ಮುಂತಾದ ಗಣ್ಯರಿಂದ ಶುಭ ಹಾರೈಕೆ
ವರದಿ-ನಜೀರ್ ಅಹಮದ್, ಮೈಸೂರು
ಮೈಸೂರು : ದೇಶದಲ್ಲಿ ಭಾರಿ ಸಂಚಲನ ಮೂಡಿಸಿರುವ ರಾಹುಲ್ ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆ ಕೇವಲ ಒಡೆದ ಮನಸ್ಸುಗಳನ್ನು ಒಗ್ಗೂಡಿಸಲು ಮತ್ತು ನಮ್ಮ ಸಂವಿಧಾನವನ್ನು ರಕ್ಷಿಸಲು ನಡೆಯುತ್ತಿರುವ ಪ್ರಯತ್ನವಷ್ಠೆ, ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ನಗರದ ಫೌಂಟೇನ್ ವೃತ್ತದಲ್ಲಿ ತಮ್ಮ ಅಭಿಮಾನಿಗಳು ಏರ್ಪಡಿಸಿದ್ದ
ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ,
ಅಧಿಕಾರದ ಆಸೆ ಅಥವಾ ರಾಜಕೀಯ ಉದ್ಧೇಶದಿಂದ ಭಾರತ್ ಜೋಡೋ ಪಾದಯಾತ್ರೆ ನಡೆಯುತ್ತಿಲ್ಲ. ದೇಶದಲ್ಲಿ ಜಾತಿ, ಜಾತಿಗಳು ಮತ್ತು ಧರ್ಮ ಧರ್ಮಗಳ ನಡುವೆ ಒಡಕು ಮೂಡಿಸಲಾಗಿದೆ. ನಾವು ಭಾರತ್ ಜೋಡೋ ಮೂಲಕ ಎಲ್ಲರ ಮನಸ್ಸುಗಳನ್ನು ಜೋಡಿಸಲು ಪಕ್ಷಾತೀತವಾಗಿ ಈ ಪಾದಯಾತ್ರೆ ಕೈಗೊಂಡಿದ್ದೇವೆ ಯಾವುದೇ ಲಾಭ ನಷ್ಟದ ಉದ್ಧೇಶವಿಲ್ಲ ಎಂದರು.
ದೇಶದ ಚಿಂತಕರು, ರೈತರು, ಪ್ರಗತಿಪರರು, ಸಾಹಿತಿಗಳು, ದೇಶದ ಹಿತ ಚಿಂತಕರು ನಮ್ಮೊಂದಿಗಿದ್ದಾರೆ. ನನ್ನ ಕ್ಷೇತದಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ ನಡೆಯಿತು ಎನ್ನುವುದಕ್ಕಿಂದ ನಮ್ಮ ಮೈಸೂರಿನಲ್ಲಿ ರಾಹುಲ್ ಗಾಂಧಿಯವರಿಗೆ ಅಪಾರವಾಗಿ ಬೆಂಬಲ ವ್ಯಕ್ತವಾದುದ್ದು, ನನ್ನ ಹುಟ್ಟು ಹಬ್ಬದಂದೆ ರಾಹುಲ್ ನಮ್ಮ ಮೈಸೂರಿಗೆ ಬಂದಿದ್ದು ನನಗೆ ಅತೀವ ಸಂತೋಷವಾಗಿದೆ ಎಂದರು.
ನಮ್ಮ ಕ್ಷೇತ್ರದ ಕಾರ್ಯಕರ್ತರರು, ಮುಖಂಡರು ಹಗಲು, ರಾತ್ರಿ ಶ್ರಮಿಸಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆಯನ್ನು ಮೈಸೂರಿನಲ್ಲಿ ಯಶಸ್ವಿಗೊಳಿಸಿದ್ದಾರೆ ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತನ್ವೀರ್ ಸೇಠ್ ಹೇಳಿದರು.
ರಾಹುಲ್ ಪಾದಯಾತ್ರೆ ವೇಳೆ ಅಶೋಕಾ ರಸ್ತೆಯಲ್ಲಿ ಕಲಾ ತಂಡಗಳ ಮೆರವಣಿಗೆಗೆ ಪೊಲೀಸರು ಅವಕಾಶ ನೀಡಲಿಲ್ಲ. ಜತೆಗೆ ಅಗತ್ಯಕ್ಕಿಂತ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದ್ದ ಕಾರಣ ಅಭಿಮಾನಿಗಳಿಗೆ ರಾಹುಲ್ ಗಾಂಧಿಯವರನ್ನು ಹತ್ತಿರದಿಂದ ನೋಡಲು ಸಾಧ್ಯವಾಗಲಿಲ್ಲ ಇದರಿಂದ ತನ್ವೀರ್ ಸೇಠ್ ಬೇಸರಗೊಂಡರು.
ಫೌಂಟೆಲ್ ಸರ್ಕಲ್ನಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ತನ್ವೀರ್ ಸೇಠ್ ೫೫ ಕೆಜಿ ತೂಕದ ಬೃಹತ್ ಕೇಕ್ ಕತ್ತರಿಸಿ ಅಭಿಮಾನಿಗಳಿಗೆ ಕೇಕ್ ತಿನ್ನಿಸಿ ತಾವೂ ಸಹ ತಿಂದು ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು. ಜತೆಗೆ ಕಾರ್ಯಕರ್ತರ ಕೈಹಿಡಿದು ಮೇಲೆತ್ತಿ ಒಗ್ಗಟ್ಟು ಪ್ರದರ್ಶಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಇಕ್ಬಾಲ್. ರಾಜ್ಯ ಸಂಘಟನಾ ಕಾರ್ಯದರ್ಶಿ ಸೈಯದ್ ಫಾರೂಖ್, ಮುಖಂಡರಾದ ಶೌಕತ್ ಅಲಿ, ಮೊಹಮ್ಮದ್ ಇಕ್ಬಾಲ್ ಪಾಷ, ಮಝರ್ ಪಾಷ, ಆರೀಫ್ ಪಾಷ, ಸೈಯದ್ ಅಬ್ಬಾಸ್, ಮಜೀದ್ ಅಹಮದ್, ಮುಷ್ತಾಖ್ ಅಹಮದ್, ಪರ್ವಿಝ್ ಮುಂತಾದವರು ಇದ್ದರು.
ರಫೀಖ್ ಅಹಮದ್ ಅವರಿಂದ ಶುಭ ಹಾರೈಕೆ
ಇದೇ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ರಫೀಖ್ ಅಹಮದ್ ಮತ್ತು ಮಂಡ್ಯ ಜಿಲ್ಲಾ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಖರ್ರಂ ಪಾಷ ಅವರು ಶಾಸಕ ತನ್ವೀರ್ ಸೇಠ್ ಅವರಿಗೆ ಪೇಠ ತೊಡಿಸಿ ಹಾರ ಹಾಕಿ ಹುಟ್ಟು ಹಬ್ಬದ ಶುಭಾಶಯ ಕೋರಿದರು.


