ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನಿಂದ ಸುಯೋಗ ವೃದ್ಧಾಶ್ರಮದಲ್ಲಿ ಧಾರ್ಮಿಕ ಪ್ರವಚನ

ವರದಿ-ವೇಣುಗೋಪಾಲ ಮುದ್ಗುಣಿ

ಶಿರಸಿ: ಅಖಿಲ  ಭಾರತೀಯ ಸಾಹಿತ್ಯ ಪರಿಷತ್ತು (ರಿ) ಶಿರಸಿ ಜಿಲ್ಲಾ ಸಮಿತಿ ವತಿಯಿಂದ ಶಿರಸಿ ಹೊರವಲಯದ ಸುಯೋಗ ವೃದ್ಧಾಶ್ರಮದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಿತು. ಪ್ರಶಾಂತ ವಾತಾವರಣ, ಮತ್ತು ಶಾಂತಿಯ ಸಂಕೇತವಾದ ಆಶ್ರಮದ ವಿಮಲಾ ಭಾಗ್ವತ ಅವರ ಶ್ರೀರಾಮನ ಸ್ತುತಿಯೊಂದಿಗೆ ಪ್ರವಚನ ಆರಂಭವಾಯಿತು.  ವಿದ್ವಾನ್ ಸುಪ್ರತೀಕ ಭಟ್ ನೀರಾಗನ ಅವರು ತಮ್ಮ ಪ್ರವಚನದಲ್ಲಿ ಬದುಕಿನ ಪಾರಮಾರ್ಥಿಕ ಸತ್ಯವನ್ನು ತಿಳಿಸಿದರು. `ಮಾಧವನಿಂದಲೇ ಮಾನವ. ಪುನಃ ಸತ್ಕರ್ಮಗಳು ಮೂಲಕ ಮಾಧವನನ್ನೆ ಸೇರಬೇಕು. ನಿಷ್ಕಲ್ಮಶ ಭಾವನೆಗಳಿಂದ ಭಗವಂತನನ್ನು ಆರಾಧಿಸಬೇಕು’ ಎಂದರು. ಅಭಾಸಾಪ ರಾಜ್ಯ ಸಮಿತಿ ಸದಸ್ಯರಾದ ಜಗದೀಶ ಭಂಡಾರಿಯವರು ಮಾತನಾಡಿ, ಕವಿ ಜಿ.ಎಸ್.ಶಿವರುದ್ರಪ್ಪ ಅವರ `ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ’ ಕವನದ ಅರ್ಥವನ್ನು ಸುಯೋಗ ಆಶ್ರಮದಲ್ಲಿ ಕಾಣಬಹುದಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಡಿಸಿದರು. ಜಯಪ್ರಕಾಶ ಹಬ್ಬು ಮಾತನಾಡಿ `ಸುಯೋಗ ವೃದ್ಧಾಶ್ರಮದ ಸತ್ಕಾರ್ಯದಲ್ಲಿ ನಿರತವಾಗಿರುವ ಲಥಿಕಾ ಭಟ್ಟ ಅವರು ನಮ್ಮ ತಾಯಿಯ ಕರುಣೆ, ಸಹೋದರಿಯ ಭಾವ ಹೊಂದಿದ್ದಾರೆ. ಭಗವಂತ ಇವರನ್ನು ಸೇವೆಗಾಗಿ ಸೃಷ್ಟಿ ಮಾಡಿದ್ದಾರೆ’ ಎಂದು ಶ್ಲಾಘಿಸಿದರು. 



ವೃದ್ಧಾಶ್ರಮ ಸಂಚಾಲಕಿ ಲಥಿಕಾ ಭಟ್ಟ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಸನ್ಮಾನಿತರು ಮಾತನಾಡಿ, `ಚಿಕ್ಕಂದಿನಲ್ಲಿ ತಂದೆಯಿಂದ ಕಲಿತ ಲಲಿತಾ ಸಹಸ್ರಾಮ ನನಗೆ ಈ ಶಕ್ತಿಯನ್ನು ನೀಡಿದೆ. ಈ ಕಾರ್ಯದಲ್ಲಿ ನನ್ನ ಕುಟುಂಬವೇ ನನ್ನ ಸಹಾಯಕ್ಕೆ ನಿಂತಿದೆ. ಇದು ನನ್ನ ಮನೆಯಲ್ಲ ನನ್ನ ಪಾಲಿಗೆ ದೇವಸ್ಥಾನ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮನೋಹರ ಮಲ್ಮನೆ, 
ಸಾಹಿತಿ ಡಿ.ಎಸ್.ನಾಯ್ಕ ಮಾತನಾಡಿದರು. ಅಬಾಸಾಪ ಕಾರ್ಯದರ್ಶಿ ಕೃಷ್ಣ ಪದಕಿ, ನಿವೃತ್ತ ಪ್ರಾಂಶುಪಾಲರಾದ ಡಾ.ಜಿ.ಎ.ಹೆಗಡೆ ಸೋಂದಾ, ಕವಯತ್ರಿ ರೋಹಿಣಿ ಹೆಗಡೆ, ದಾಕ್ಷಾಯಿಣಿ, ಶೋಭಾ ಭಟ್ಟ, ಎಲ್.ಆರ್.ಭಟ್ ದಂಪತಿಗಳು, ಶ್ರೀಧರ ಹೆಗಡೆ ಚಪ್ಪರಮನೆ ದಂಪತಿಗಳು, ಶಾಂತಾರಾಮ ಹೆಗಡೆ, ಬಂಡಿಮನೆ, ಭಾಸ್ಕರ ಗೋ ಹೆಗಡೆ, ಗಣಪತಿ ನಾ ಭಟ್ಟ, ಲಲಿತಾ ನಾ.ಭಟ್ಟ, ರಾಜು ಉಗ್ರಾಣಕರ, ಸಾವಿತ್ರಿ ಶಾಸ್ತ್ರಿ ಮುಂತಾದವರು ಉಪಸ್ಥಿತರಿದ್ದರು.