ಸಮಾಜ ಸುದಾರಣೆಯಲ್ಲಿ ಅಣ್ಣ ಬಸವಣ್ಣ, ಅಕ್ಕಮಹಾದೇವಿಯವರ ಕೊಡುಗೆ ಅಪಾರ : ರಾಷ್ಟ್ರಪತಿ ದ್ರೌಪದಿ ಮುರ್ಮು


ಮೈಸೂರು, ಸೆ.೨೬-ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಉದ್ಘಾಟನೆಯನ್ನು ರಾಷ್ಟ್ರದ ಪ್ರಥಮ ಪ್ರಜೆಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ದಸರಾ ಮಹೋತ್ಸವಕ್ಕೆ ಚಾಲನೆ ನೀಡಿರುವುದಕ್ಕೆ ಸಂತೋಷವಾಗಿದೆ. ನಮ್ಮ ಆಧ್ಯಾತ್ಮಿಕ ಸಾಂಸ್ಕೃತಿಕತೆಗೆ ದಸರಾ ಪ್ರತೀಕವಾಗಿದೆ. ಮೈಸೂರು ದಸರಾ ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದೆ ಎಂದರು. 
ಆದಿ ಶಂಕರಾಚಾರ್ಯರು ಶೃಂಗೇರಿ ಮಠವನ್ನು ಸ್ಥಾಪಿಸಿದರು. ಕರ್ನಾಟಕದಲ್ಲಿ ಬಸವಣ್ಣ ಅಕ್ಕಮಹಾದೇವಿ ಅವರು ಸಮಾಜ ಸುಧಾರಣೆ ಮಾಡಿದರು. ಬಸವಣ್ಣ ಅವರು ಅನುಭವ ಮಂಟಪವನ್ನು ಸ್ಥಾಪನೆ ಸಮಾಜ ಸುದಾರಣೆಯಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಕರ್ನಾಟಕವು ಭಕ್ತಿ, ಆಧ್ಯಾತ್ಮಿಕತೆ ಹಾಗೂ ಮಹಿಳಾ ಸಬಲೀಕರಣಕ್ಕೆ ಹೆಸರು ವಾಸಿಯಾಗಿದೆ. ಕರ್ನಾಟಕದಲ್ಲಿ ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಆಳಿದರು. ಒನಕೆ ಓಬವ್ವ ರಾಜ್ಯ ಸಂರಕ್ಷಣೆಯಲ್ಲಿ ಹೋರಾಡಿ ಹುತಾತ್ಮರಾದರು. ನೀತಿ ಆಯೋಗವು ಭಾರತದಲ್ಲಿ ಸುಸ್ಥಿರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಸಲಹೆ ನೀಡಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆಗಳ ನಿರ್ಮಾಣ ಮಾಡಲಾಗಿದೆ. ಪ್ರತಿ ಮನೆ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯಪಾಲರಾದ ತಾವರ್‌ಚಂದ್ ಗ್ಲೇಹೋಟ್ ಅವರು ಮಾತನಾಡಿ ವಿಶ್ವಪ್ರಸಿದ್ಧ ಮೈಸೂರು ದಸರಾ ೯ ದಿನಗಳ ಕಾಲ ನಡೆಯುತ್ತದೆ. ದಸರಾ ವೀಕ್ಷಣೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಚಾಮುಂಡಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ನಾನು ಅದೃಷ್ಟಶಾಲಿ. ರಾಜ್ಯದ ಜನತೆಗೆ ಚಾಮುಂಡಿ ದೇವಿಯು ಸುಖ ಸಮೃದ್ಧಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಕಳೆದ ಎರಡು ವರ್ಷಗಳು ಕೋವಿಡ್ ಇದ್ದುದರಿಂದ ದಸರಾವನ್ನು ಸರಳವಾಗಿಯೇ ಆಚರಿಸಲಾಗಿತ್ತು. ಈ ಬಾರಿ ಗತವೈಭವವನ್ನು ನೆನಪಿಸುವಂತೆ ಅದ್ಧೂರಿಯಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. ನಾಡಿನ ಮನೆಮನೆಯಲ್ಲೂ ನಾಡಹಬ್ಬ ಆಚರಣೆ ಮಾಡಲಾಗುತ್ತಿದೆ. ಚಾಮುಂಡಿ ದೇವಿಯ ಆಶೀರ್ವಾದದಿಂದ ಕರ್ನಾಟಕದಲ್ಲಿ ಕಾಲಕಾಲಕ್ಕೆ ಮಳೆಯಾಗುತ್ತಿದೆ ಎಂದು ತಿಳಿಸಿದರು.
 ಚಾಮುಂಡಿ ಬೆಟ್ಟದಲ್ಲಿ ಸ್ಥಾಪನೆಯಾಗಿರುವ ದೇವಿ ಶಕ್ತಿಪೀಠ ಇಡೀ ನಾಡಿಗೆ ಶಕ್ತಿಯನ್ನು ನೀಡುತ್ತಿದೆ. ಇಂದಿನ ಹತ್ತು ಹಲವಾರು ನೈಸರ್ಗಿಕ ಸವಾಲುಗಳನ್ನು ಎದುರಿಸಿ ಜನ ಕಲ್ಯಾಣದ ಕಡೆಗೆ ನಾವು ಹೆಜ್ಜೆ ಹಾಕುತ್ತಿದ್ದೇವೆ. ದುಷ್ಟರ ಸಂಹಾರ ಶಿಷ್ಟರ ಪರಿಪಾಲನೆ ಹಿಂದಿನಿಂದಲೂ ಬಂದಿದೆ. ನಮ್ಮೊಳಗಿರುವ ದುಷ್ಟ ವಿಚಾರಗಳನ್ನು ತೆಗೆದುಹಾಕಬೇಕು. ಅದೇ ರೀತಿ ನಾವು ಶುದ್ಧ ಮನಸ್ಸನ್ನು ಇಟ್ಟುಕೊಳ್ಳಬೇಕು. ಕರ್ನಾಟಕವನ್ನು ಆರ್ಥಿಕ, ಧಾರ್ಮಿಕ ಹಾಗೂ ಸಾಮಾಜಿಕವಾಗಿ ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು. ಜನರ ಸಮತೋಲನ ಅಭಿವೃದ್ಧಿಗೆ ನಾವು ಶ್ರಮಿಸುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹಲ್ಲಾದ ಜೋಷಿ, ಕೇಂದ್ರ ಕೃಷಿ ಮತ್ತು ರಸಗೊಬ್ಬರ ಖಾತೆ ಸಚಿವರಾದ ಶೋಭಾ ಕರಂದ್ಲಾಜೆ, ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂದನ ಸಚಿವರಾದ ಸುನೀಲ್ ಕುಮಾರ್ ಅವರು ಉಪಸ್ಥಿತರಿದ್ದರು.