ಭಕ್ತರು, ದೇವಾಲಯದ ಧರ್ಮದರ್ಶಿಗಳ ಮುಸುಕಿನ ಗುದ್ದಾಟದಿಂದ ಶ್ರೀ ಸಣ್ಣಕ್ಕಿರಾಯನ ದೇವಾಲಯಕ್ಕೆ ಬೀಗ

 ದೇವಾಲಯ ತೆರವಿಗೆ ಹೈಕೋರ್ಕ್ ಆದೇಶವಿದ್ದರೂ ಕ್ಯಾರೆ ಎನ್ನದೆ ಬೀಗ ತೆರೆಯದ ಟ್ರಸ್ಟಿಗಳು

ವರದಿ-ಟಿ.ಬಿ.ಸಂತೋಷ, ಮದ್ದೂರು

ಮದ್ದೂರು : ತಾಲ್ಲೂಕಿನ ದೊಡ್ಡರಸಿನಕೆರೆ ಗ್ರಾಮದ ಶ್ರೀ ಸಣ್ಣಕ್ಕಿರಾಯ ದೇವಾಲಯದ ಆಡಳಿತ ಮಂಡಳಿಯ ಟ್ರಸ್ಟಿಗಳು ಹಾಗೂ ಭಕ್ತರ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿದ್ದು, ದೇವಾಲಯದ ಬಾಗಿಲು ತೆರೆಯ ಬೇಕೆಂಬ ಹೈಕೋರ್ಟ್ ಆದೇಶಕ್ಕೂ ಟ್ರಸ್ಟಿಗಳು ಕ್ಯಾರೆ ಎನ್ನದೇ ದೇವಾಲಯಕ್ಕೆ ಬೀಗ ಜಡಿದಿದ್ದಾರೆ.
ಕಳೆದ ಹಲವಾರು ತಿಂಗಳಿಂದ ಈ ಗುದ್ದಾಟ ಮುಂದುವರಿದಿದ್ದು, ಟ್ರಸ್ಟಿ ಜಯಪ್ರಕಾಶ್‍ಗೌಡ ಮತ್ತು ದೇವಸ್ಥಾನದ ಭಕ್ತರು ವಿವಾದ ಬಗೆಹರಿಸುವಂತೆ ಹೈಕೋರ್ಟ್ ಮೆಟ್ಟಿಲೆರಿದ್ದರು. ನ್ಯಾಯಾಲಯ ದೇವಾಲಯದ ಬೀಗ ತೆಗೆದು ಸಾರ್ವಜನಿಕರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಹೇಳಿದೆ. ಅದರಂತೆ ಶುಕ್ರವಾರ ದೇವಸ್ಥಾನದ ಬಾಗಿಲು ತೆಗೆದು ಪೂಜೆ ಸಲ್ಲಿಸಲು ಆದೇಶವನ್ನೂ ಸಹ ನೀಡಿತ್ತು. 
ಅದರಂತೆ ನೂರಾರು ಭಕ್ತರು ದೇವಾಲಯದ ಮುಂದೆ ಜಮಾಯಿಸಿ ಪೂಜೆ ಸಲ್ಲಿಸಲು ಕಾಯುತ್ತಿದ್ದರು. ಈ ಬಗ್ಗೆ ಪೊಲೀಸರೂ ಸಹ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಆದರೆ, ಆಡಳಿತ ಮಂಡಳಿಯ ಟ್ರಸ್ಟಿ ಜಯಪ್ರಕಾಶ್ ಗೌಡ ತಮ್ಮಲ್ಲಿಯೇ ಬೀಗದ ಕೀ ಇರಿಸಿಕೊಂಡು ದೇವಸ್ಥಾನದ ಬಳಿ ಬರದೆ ಹೈಕೋರ್ಟ್ ಅದೇಶವನ್ನು ಧಿಕ್ಕರಿಸಿದ್ದಾರೆ ಎಂದು ಸಾರ್ವಜನಿಕರು ಆರೋಫಿಸಿದರು.
ಈ ಬಗ್ಗೆ ದೇವಾಲಯದ ಆಡಳಿತಾಧಿಕಾರಿಯೂ ಆದ ಕಂದಾಯ ನಿರೀಕ್ಷಕರು ತಹಶೀಲ್ದಾರ್ ರವರಿಗೆ ವರದಿಯನ್ನು ಸಲ್ಲಿಸಿದ್ದಾರೆ. 
ಸ್ಥಳೀಯ ಗ್ರಾಪಂ ಸದಸ್ಯ ಮಂಚೆಗೌಡ ಮಾತನಾಡಿ, ದೇವಸ್ಥಾನದ ಬೀಗ ತೆರೆದು ಪೂಜೆ ಸಲ್ಲಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಟ್ರಸ್ಟಿ ಜಯ ಪ್ರಕಾಶ್ ಗೌಡ ಹೈಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ ಕಾನೂನಿಗೆ  ಅಗೌರವ ತೋರಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಗ್ರಾಮದ ಮುಖಂಡರಾದ ರಾಮಕೃಷ್ಣ, ಅನಂದಪ್ಪ, ಇನ್ನಿತರರು ಇದ್ದರು.