ದಸರಾ ಭದ್ರತೆಗೆ ೫,೪೮೫ ಪೊಲೀಸ್, ೧೩,೧೪೦ ಸಿಸಿ ಕ್ಯಾಮೆರಾ

 ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ, ಬಾಡಿ ಪೋರ್ಸ್ ಕ್ಯಾಮರಾ, ಮೊಬೈಲ್ ಕಮಾಂಡ್ ಸೆಂಟರ್ ಬಸ್ ಬಳಕೆ

ಮೈಸೂರು : ನಾಡಹಬ್ಬ ಮೈಸೂರು ದಸರಾ ಯಶಸ್ವಿಯಾಗಿಸಲು ಪೊಲೀಸ್ ಇಲಾಖೆ ಸಜ್ಜಾಗಿದ್ದು, ಭದ್ರತೆಗಾಗಿ ೫,೪೮೫ ಪೊಲೀಸ್ ಸಿಬ್ಬಂದಿ ಬಳಕೆ ಮತ್ತು ವಿವಿಧೆಡೆ ೧೩,೧೪೦ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸೆ.೨೬ ರಿಂದ ಅ.೫ ರವರೆಗೆ ಜಂಬೂ ಸವಾರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಪೊಲೀಸ್ ಇಲಾಖೆಯಿಂದ ಸಕಲ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದರು.
ಮೈಸೂರಿನಿಂದ ೧,೨೫೫, ಹೊರ ಜಿಲ್ಲೆಗಳಿಂದ ೩,೫೮೦ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು, ೬೫೦ ಗೃಹರಕ್ಷಕ ಸಿಬ್ಬಂದಿಗಳು ಸೇರಿದಂತೆ ಒಟ್ಟು ೫,೪೮೫ ಪೊಲೀಸರನ್ನು ಬಂದೋಬಸ್ತ್ಗೆ ನೇಮಕ ಮಾಡಲಾಗುವುದು. ಸಿಸಿಟಿವಿ, ಬಾಡಿ ಪೋರ್ಸ್ ಕ್ಯಾಮರಾಗಳು, ಲಾಂಗ್ ಡಿಸ್ಟೆನ್ಸ್ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿಗಳನ್ನು ತೆಗೆಯುವ ಮೊಬೈಲ್ ಕಮಾಂಡ್ ಸೆಂಟರ್ ಬಸ್‌ನ್ನು ಈ ಬಾರಿಯ ದಸರಾದಲ್ಲಿ ಬಳಸುತ್ತಿದ್ದೇವೆ. ಅರಮನೆ ಮತ್ತು ಬನ್ನಿ ಮಂಟಪದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ  ಬಾಡಿಪೋರ್ಸ್ ಕ್ಯಾಮರಾ ನೀಡಲಾಗುತ್ತದೆ. ಅಲ್ಲಿನ ಸಂಪೂರ್ಣ ದೃಶ್ಯಾವಳಿ ಈ ಕ್ಯಾಮರಾಗಳಲ್ಲಿ ಮತ್ತು ಮೊಬೈಲ್ ಕಮಾಂಡ್  ಸೆಂಟರ್‌ನಲ್ಲಿ ರೆಕಾರ್ಡ್ ಆಗುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಪ್ರಮುಖ ಸ್ಥಳಗಳಲ್ಲಿ ಡ್ರೋಣ್ ಕ್ಯಾಮರಾ, ಎತ್ತರದ ಪ್ಲಾಟ್‌ಫಾರ್ಮ್ ಮೇಲೆ ಪೊಲೀಸ್ ಕಣ್ಗಾವಲು, ಲಾಡ್ಜ್ಗಳಲ್ಲಿ ಅನಿರೀಕ್ಷಿತ ತಪಾಸಣೆ, ರೈಲು ಮತ್ತು ಬಸ್ ನಿಲ್ದಾಣಗಳಲ್ಲಿ ೨೪ಗಂಟೆ ಗಸ್ತು, ಸುಸಜ್ಜಿತ ಗಸ್ತು ವಾಹನ, ೧೨ ಅಗ್ನಿಶಾಮಕ ದಳ, ೮ ಆಂಬುಲೆನ್ಸ್ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ವಿವರಿಸಿದರು.
ಅರಮನೆಯಿಂದ ಬನ್ನಿಮಂಟಪದ ತನಕ ಮೆರವಣಿಗೆ ಮಾರ್ಗದಲ್ಲಿ ೨೪ ಗಂಟೆಯೂ ರೆಕಾರ್ಡ್ ಆಗುವ ೧೧೦ ಸಿಸಿ ಕ್ಯಾಮರಾ ಅಳವಡಿಕೆ,  
ಗರುಡಾ ಫೋರ್ಸ್ ಮತ್ತು ಎಎನ್‌ಎಫ್ ತಂಡಗಳ ಬಳಕೆಗೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಸದಂತೆ ರೌಡಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.
ಮಹಿಷಾ ದಸರಾಕ್ಕೆ ಅವಕಾಶವಿಲ್ಲ :
ಚಾಮುಂಡಿಬೆಟ್ಟದ ಮಹಿಷ ಪ್ರತಿಮೆ ಬಳಿ ಮಹಿಷ ದಸರಾ ಆಚರಣೆಗೆ ಅನುಮತಿ ನಿರಾಕರಿಸಲಾಗಿದೆ. ಪ್ರತಿಮೆಯ ಸುತ್ತ  ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಕಾವಲು ಹಾಕಲಾಗಿದೆ. ಮಹಿಷ ಪ್ರತಿಮೆಗೆ ಮಾಲಾರ್ಪಣೆ, ಪುಷ್ಪಾರ್ಚನೆಗೆ ಅವಕಾಶವಿಲ್ಲ. ಇದಕ್ಕಾಗಿ ಮಹಿಷ ಪ್ರತಿಮೆಯನ್ನು ಬಟ್ಟೆಯಿಂದ ಮುಚ್ಚಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಚಾಮುಂಡಿಬೆಟ್ಟಕ್ಕೆ ತೆರಳುವ ಎಲ್ಲರನ್ನೂ ತಪಾಸಣೆ ಮಾಡಲಾಗುವುದು ಎಂದು ಮೈಸೂರು ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ತಿಳಿಸಿದರು.